ಕೊರತೆಯ ಹಣಕಾಸು

ಸರ್ಕಾರ ತನ್ನ ಆಯಕ್ಕಿಂತ ವ್ಯಯ ಅಧಿಕವಾಗಿರುವಂತೆ-ಆಯವ್ಯಯದಲ್ಲಿ ಕೊರತೆ ಏರ್ಪಡುವಂತೆ-ಬುದ್ಧಿಪೂರ್ವಕವಾಗಿ ಕೈಗೊಂಡ ಕ್ರಮ (ಡೆಫಿಸಿಟ್ ಫಿನಾನ್ಸಿಂಗ್). ತೆರಿಗೆ ಶುಲ್ಕ, ಸರ್ಕಾರಿ ಉದ್ಯಮಗಳಿಂದ ಸಂಪಾದನೆ ಇವು ಸಾಮಾನ್ಯವಾಗಿ ಸರ್ಕಾರದ ಚಾಲ್ತಿ ಆಯದ ಬಾಬ್ತುಗಳು. ಸರ್ಕಾರದ ಸಾಮಾನ್ಯ ಕಾರ್ಯಗಳಿಗಾಗಿ ಮಾಡತಕ್ಕ ಖರ್ಚುಗಳು-ಚಾಲ್ತಿ ವ್ಯಯದ ಬಾಬ್ತುಗಳು-ಅದರ ಆಯದ ಪರಿಮಿತಿಯೊಳಗೆ ಇದ್ದ ಪಕ್ಷದಲ್ಲಿ ಅದು ತನ್ನ ಸಂಪಾದನೆಗೆ ಮೀರದ ರೀತಿಯಲ್ಲಿ ಆಡಳಿತ ನಿರ್ವಹಿಸುತ್ತಿದೆಯೆಂದು ಅರ್ಥ. ಮೇಲೆ ಹೇಳಿದ ಆಯದ ಬಾಬ್ತುಗಳು ಸಾಲದೆ ಹೋಗಿ, ಬ್ಯಾಂಕಿನಿಂದಲೋ ಸಾರ್ವಜನಿಕರಿಂದಲೋ ಪಡೆದ ಸಾಲದಿಂದ ಹೆಚ್ಚಿನ ವ್ಯಯವನ್ನು ತೂಗಿಸಲಾಗಿದ್ದರೆ ಅದು ಕೊರತೆಯ ಹಣಕಾಸು ಎನಿಸಿಕೊಳ್ಳುತ್ತದೆ. ಸರ್ಕಾರದ ಆಯವ್ಯಯ ಎಷ್ಟರಮಟ್ಟಿಗೆ ಉಬ್ಬರಕಾರಕವಾದ್ದು, ಆರ್ಥಿಕ ಚಟುವಟಿಕೆಯ ವಿಸ್ತಾರಕ್ಕೆ ಕಾರಣವಾದ್ದು ಎಂಬ ದೃಷ್ಟಿಯಿಂದ ಸರ್ಕಾರದ ಹಣಕಾಸುಕಾರ್ಯ ಕೊರತೆಯಿದೆ. ಅಲ್ಲವೆ, ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬಹುದು. ಆಗ ಸರ್ಕಾರದ ಸಾಮಾನ್ಯ ಆಯವ್ಯಯವನ್ನು ಮಾತ್ರವೇ ಅಲ್ಲದೆ ಅದರ ಹಿನ್ನಲೆಯನ್ನೂ ವೀಕ್ಷಿಸಬೇಕು. ಅದರ ಆಯವ್ಯಯಗಳ ಒಂದೊಂದು ಬಾಬ್ತನ್ನೂ ಪರಿಶೀಲಿಸಬೇಕು. ಸರ್ಕಾರದ ಆಯದ ಕೆಲವು ಬಾಬ್ತುಗಳಿಂದ ಜನರ ಕೈಯಲ್ಲಿರುವ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ತೆರಿಗೆ ಒಂದು ಉದಾಹರಣೆ. ಮತ್ತೆ ಕೆಲವು ಆಯದ ಬಾಬ್ತುಗಳಿಂದ ಅದೇ ಪ್ರಮಾಣದಲ್ಲಿ ಜನರ ಕೊಳ್ಳುವ ಶಕ್ತಿ ಕಡಿಮೆಯಾಗದಿರಬಹುದು. ಖಜಾನೆ ಹುಂಡಿಗಳ ವಿಕ್ರಯ ಸರ್ಕಾರದ ಇಂಥ ಆಯದ ಒಂದು ಬಾಬ್ತು. ಸರ್ಕಾರದ ಹಣಕಾಸಿನ ಕಾರ್ಯ ಕೊರತೆಯಿದೆ, ಅಲ್ಲವೆ ಎಂಬುದನ್ನು ನಿರ್ಣಯಿಸುವಾಗ, ಅದರ ಆಯವ್ಯಯದಲ್ಲಿ ಎಷ್ಟರಮಟ್ಟಿನ ಕೊರತೆ ಇದೆಯೆಂಬುದನ್ನು ನಿರ್ಧರಿಸುವಾಗ, ಯಾವಯಾವ ಬಾಬ್ತುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದು ತೀವ್ರವಾದಗ್ರಸ್ತ. ವಿಚಾರವಾಗಿದೆ. ಒಂದು ದೇಶದ ಅರ್ಥವ್ಯವಸ್ಥೆಯ ದ್ರವತೆಗೆ ಸರ್ಕಾರದ ಚಟುವಟಿಕೆಗಳು ಎಷ್ಟರಮಟ್ಟಿಗೆ ಉತ್ತೇಜಕವಾಗಿದೆಯೆಂಬುದನ್ನು ಅಳೆಯಲು ಅದರ ಆಯವ್ಯಯ ಕೊರತೆ ಒಂದು ಸಾಧನ. ಹಣದ ಸರಬರಾಯಿಯಲ್ಲಿ ಸಂಭವಿಸುವ ವ್ಯತ್ಯಾಸಗಳಿಂದಲೂ ಹಣಕ್ಕೆ ಅತ್ಯಂತ ನಿಕಟವಾಗಿರುವಂಥ ಆಸ್ತಿಗಳ ನಿರ್ಮಾಣದಿಂದಲೂ ಆರ್ಥಿಕತೆಯಲ್ಲಿ ಉಬ್ಬರದ ಒತ್ತಡಗಳು ಸಂಭವಿಸುವುದೆಂದು ಭಾವಿಸಿ, ಆ ದೃಷ್ಟಿಯಲ್ಲಿ ಸರ್ಕಾರದ ಚಟುವಟಿಕೆಗಳನ್ನು ವೀಕ್ಷಿಸುವುದುಂಟು. ಸರ್ಕಾರ ಜನರಿಂದ ತೆರಿಗೆಗಳನ್ನು ವಸೂಲು ಮಾಡಿದಾಗ ಅವಕ್ಕೆ ಪ್ರತಿಯಾಗಿ ಅವರ ಕೈಯಲ್ಲಿ ಯಾವ ಆಸ್ತಿಯೂ ಸೃಷ್ಟಿಯಾಗುವುದಿಲ್ಲ. ಆದರೆ ಸರ್ಕಾರ ಜನರಿಂದ ಸಾಲ ಎತ್ತಿದಾಗ ಜನರಿಂದ ಸರ್ಕಾರಕ್ಕೆ ಹೋದ ಹಣಕ್ಕೆ ಪ್ರತಿಯಾಗಿ ಅವರ ಕೈಗೆ ಸಾಲಪತ್ರಗಳು ಲಭ್ಯವಾಗುತ್ತವೆ. ಇವು ಸರ್ಕಾರದ ಸಾಲಚಟುವಟಿಕೆಗಳ ಫಲವಾಗಿ ಸೃಷ್ಟಿಯಾದ ಆಸ್ತಿಗಳು. ಇವುಗಳಿಂದ ಆರ್ಥಿಕತೆಯ ದ್ರವತೆಯ ಮೇಲೆ ಆಗುವ ಪರಿಣಾಮ ಕುತೂಹಲಕರವಾದ್ದು, ಈ ನಾನಾ ವಿಚಾರಗಳ ದೃಷ್ಟಿಯಲ್ಲಿ ಕೊರತೆಯ ಹಣಕಾಸಿನ ಅರ್ಥವನ್ನು ಸಂದರ್ಭೋಚಿತವಾಗಿ ಕಾಲದೇಶಾನುಗುಣವಾಗಿ ಹಿಗ್ಗಿಸಿ ಅಥವಾ ಕುಗ್ಗಿಸಿಕೊಳ್ಳಬೇಕಾಗುತ್ತದೆ.

ಕೊರತೆಯ ಹಣಕಾಸಿಗೆ ಭಾರತದ ಯೋಜನಾ ಆಯೋಗ ನೀಡಿರುವ ವ್ಯಾಖ್ಯೆ ಇಲ್ಲಿ ಉಲ್ಲೇಖಾರ್ಹವಾದ್ದು. ಸರ್ಕಾರದ ಆಯವ್ಯಯ ಚಟುವಟಿಕೆಗಳ ಫಲವಾಗಿ ಆರ್ಥಿಕತೆಯಲ್ಲಿ ಕೊಳ್ಳುವ ಶಕ್ತಿಯ ನಿವ್ವಳ ಆಧಿಕ್ಯ ಸಂಭವಿಸುವುದಾದರೆ ಅದನ್ನು ಯೋಜನಾ ಆಯೋಗ ಕೊರತೆಯ ಹಣಕಾಸು ಎಂದು ಕರೆಯುತ್ತದೆ. ಕೊರತೆಯ ಹಣಕಾಸಿನ ಪರಿಮಾಣ ಆ ಆಧಿಕ್ಯಕ್ಕೆ ಸಮನಾಗಿರುತ್ತದೆ. ತೆರಿಗೆ, ಶುಲ್ಕ, ಸಾರ್ವಜನಿಕರಿಂದ ಎತ್ತಿದ ಸಾಲ ಮುಂತಾದ ಆಯದ ಬಾಬ್ತುಗಳಿಗೆ ಮೀರಿ ಸರ್ಕಾರ ವ್ಯಯ ಮಾಡಿದರೆ ಅದನ್ನು ಕೊರತೆಯ ಹಣಕಾಸು ಎಂದು ಕರೆಯುವುದು ಭಾರತದಲ್ಲಿ ಬಂದಿರುವ ರೂಢಿ. ಹೀಗೆ ಆಯಕ್ಕೆ ಮೀರಿದ ವ್ಯಯವನ್ನು ತೂಗಿಸಲು ರಿಸರ್ವ್ ಬ್ಯಾಂಕಿನಲ್ಲಿ ತನ್ನ ಲೆಕ್ಕದಲ್ಲಿರುವ ನಗದು ಶಿಲ್ಕುಗಳನ್ನು ಬಳಸಿಕೊಳ್ಳುವುದು. ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು-ಇವು ಭಾರತ ಸರ್ಕಾರ ಸಾಮಾನ್ಯವಾಗಿ ಅನುಸರಿಸುವ ಕೊರತೆಯ ಹಣಕಾಸು ವಿಧಾನಗಳು. ಸರ್ಕಾರ ಖರ್ಚಿಗಾಗಿ ರಿಸರ್ವ್ ಬ್ಯಾಂಕಿನಿಂದ ಹಣ ಪಡೆದರೆ ಸರ್ಕಾರದ ಋಣದ ಆಧಾರದ ಮೇಲೆ (ಈ ಬಗ್ಗೆ ಜಾರಿಯಲ್ಲಿರುವ ನಿಬಂಧನೆಗಳಿಗೆ ಅನುಗುಣವಾಗಿ) ರಿಸರ್ವ್ ಬ್ಯಾಂಕು ನೋಟು ಸೃಷ್ಟಿಸುತ್ತದೆ. ಜನರಲ್ಲಿ ಹಣದ ಸರಬರಾಯಿಯನ್ನು ಅಧಿಕಗೊಳಿಸುವ ಈ ವಿಧಾನಗಳು ಕೊರತೆಯ ಹಣಕಾಸಿನ ವ್ಯಾಪ್ತಿಯಲ್ಲಿ ಬರುತ್ತವೆ. ಸಾರ್ವಜನಿಕರಿಂದ ಸರ್ಕಾರ ಎತ್ತುವ ಸಾಲ ಕೊರತೆಯ ಹಣಕಾಸು ಎನಿಸಿಕೊಳ್ಳುವುದಿಲ್ಲ. ಏಕೆಂದರೆ ಇದರಿಂದ ದೇಶದಲ್ಲಿಯ ಒಟ್ಟು ಖರ್ಚು ಅಧಿಕವಾಗುವುದಿಲ್ಲ.

ಈ ವಿವೇಚನೆಯಿಂದ ಒಂದು ಮುಖ್ಯ ಅಂಶ ಸ್ಪಷ್ಟವಾಗುತ್ತದೆ. ಒಂದು ಸರ್ಕಾರದ ಚಾಲ್ತಿ ಆಯವ್ಯಯದಲ್ಲಿ ಆಯಕ್ಕಿಂತ ವ್ಯಯ ಅಧಿಕವಾಗಿರುವ ಸಂದರ್ಭಗಳು ಬರುವುದುಂಟು. ಇದು ಉದ್ದೇಶಪೂರ್ವಕವಾಗಿಯೇನೂ ಇರಬೇಕಾದುದಿಲ್ಲ. ಬಂಡವಾಳ ಬಾಬ್ತುಗಳನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ. ಇದು ಆಯವ್ಯಯದಲ್ಲಿ ಸಹಜವಾಗಿ ಸಂಭವಿಸುವ ಕೊರತೆ. ಆಯವ್ಯಯ ಕೊರತೆಗೆ ಎಡೆಕೊಡಬಾರದೆಂಬುದು ಸಂಪ್ರದಾಯವಾದಿಗಳ ಅಭಿಪ್ರಾಯ. ಚಾಲ್ತಿ ಬಾಬ್ತುಗಳನ್ನೇ ಅಲ್ಲದೆ ಬಂಡವಾಳ ಬಾಬ್ತುಗಳನ್ನೂ-ಸಾರ್ವಜನಿಕರಿಂದ ಎತ್ತಿದ ಸಾಲ ಮುಂತಾದವನ್ನೂ-ತೆಗೆದುಕೊಂಡ ಮೇಲೂ ಕೊರತೆ ಉಳಿದುಕೊಂಡಿದ್ದು, ಇದನ್ನು ಭರ್ತಿಮಾಡಲು ಹಣಕಾಸಿನ ಕ್ರಮ ಕೈಗೊಂಡರೆ ಅದು ಕೊರತೆಯ ಹಣಕಾಸು ಎನಿಸಿಕೊಳ್ಳುತ್ತದೆ. ಇದು ಹೆಚ್ಚು ವ್ಯಾಪಕವಾದ್ದು, ಬುದ್ಧಿಪೂರ್ವಕವಾದ್ದು.

ಸರ್ಕಾರ ಕೊರತೆಯ ಹಣಕಾಸು ಕ್ರಮ ಕೈಗೊಳ್ಳುವ ಸಂದರ್ಭಗಳು ಮೂರು. ದೇಶ ಯುದ್ಧದಲ್ಲಿ ತೊಡಗಿದ್ದಾಗ ಅದರ ಖರ್ಚಿಗೆ ಚಾಲ್ತಿ ಹಾಗೂ ಬಂಡವಾಳ ಬಾಬ್ತುಗಳಿಂದ ಬರುವ ಆಯಗಳು ಸಾಕಾಗುವುದಿಲ್ಲ. ತೆರಿಗೆ, ಸಾಲ ಮುಂತಾದ ಎಲ್ಲ ಕ್ರಮಗಳನ್ನೂ ಅದು ಗರಿಷ್ಠ ಮಿತಿಯವರೆಗೂ ಕೈಗೊಳ್ಳುತ್ತದೆ. ಈ ಮೂಲಗಳಿಂದ ಪಡೆದ ಹಣವೂ ಸರ್ಕಾರದ ಯುದ್ಧಕಾರ್ಯಕ್ಕೆ ಸಾಲುವುದಿಲ್ಲ. ಆಗ ಅದು ಕೊರತೆಯ ಹಣಕಾಸಿನ ಕ್ರಮ ಅನುಸರಿಸುತ್ತದೆ. ಬ್ಯಾಂಕುಗಳಿಗೆ ಸರ್ಕಾರಿ ಪ್ರತಿಭೂತಿಗಳನ್ನು ಕೊಟ್ಟು ಹಣ ಪಡೆಯುತ್ತದೆ. ಖರ್ಚುಗಳ ಪಾವತಿಗೆ ಕೇಂದ್ರೀಯ ಬ್ಯಾಂಕಿನ ಮೇಲೆ ಚೆಕ್ಕುಗಳನ್ನು ನೀಡುತ್ತದೆ. ಬ್ಯಾಂಕುಗಳ ದ್ರವತೆ ಅಧಿಕವಾಗುವುದರಿಂದ ದೇಶದಲ್ಲಿ ಹಣದ ಹರಿವಿನ ಪಾತ್ರ ವಿಸ್ತಾರವಾಗುತ್ತದೆ. ಕೇಂದ್ರೀಯ ಬ್ಯಾಂಕು ತನ್ನ ವಿಸ್ತøತ ಆಸ್ತಿಗಳ (ಸರ್ಕಾರದ ಋಣ ಮತ್ತು ಅದರಿಂದ ಪಡೆದ ಪ್ರತಿಭೂತಿಗಳು) ತಳಹದಿಯ ಮೇಲೆ ಹೆಚ್ಚು ನೋಟು ನೀಡುತ್ತದೆ. ದೇಶದಲ್ಲಿ ನಿವ್ವಳ ಹಣದ ಸರಬರಾಯಿ ಅಧಿಕವಾಗಿ ಉಬ್ಬರ ಪರಿಸ್ಥಿತಿ ಉದ್ಭವಿಸುತ್ತದೆ. 

ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಸಂಭವಿಸಿ, ಉತ್ಪಾದನೆ, ಉದ್ಯೋಗ, ವರಮಾನ, ಬೇಡಿಕೆ-ಎಲ್ಲವೂ ಕೆಳಗಿನ ಮಟ್ಟದಲ್ಲಿರುವಾಗಲೂ ಸರ್ಕಾರ ಕೊರತೆಯ ಹಣಕಾಸಿನ ವಿಧಾನವನ್ನನುಸರಿಸಿ ಆ ಸ್ಥಿತಿಯನ್ನು ನಿವಾರಿಸಲು ಪ್ರಯತ್ನಿಸುವುದುಂಟು. ಪರಿಣಾಮಕಾರಿ ಬೇಡಿಕೆಯ ಅಭಾವವೇ ಆವರ್ತಾತ್ಮಕ ನಿರುದ್ಯೋಗಕ್ಕೆ ಕಾರಣ. ಪರಿಣಾಮಕಾರಿ ಬೇಡಿಕೆಯನ್ನು ಕುದುರಿಸುವ ಕ್ರಮಗಳು ಆರ್ಥಿಕ ಮುಗ್ಗಟ್ಟಿನ ಪರಿಹಾರಕ್ಕೆ ಕೇನ್ಸ್ ಸೂಚಿಸಿದ ಮುಖ್ಯೋಪಾಯ. ಇದನ್ನು ಸರ್ಕಾರ ನಾನಾ ಬಗೆಯಾಗಿ ಆಗಮಾಡಿಸಬಹುದು. ಖಾಸಗಿ ವಲಯದಲ್ಲಿ ಸರಕಿನ ಅನುಭೋಗ ಹಾಗೂ ವಿನಿಯೋಜನೆಗಳನ್ನು (ಇನ್‍ವೆಸ್ಟ್‍ಮೆಂಟ್) ಅಧಿಕಗೊಳಿಸುವುದರಿಂದ ಅನುಭೋಗ ಹಾಗೂ ಉತ್ಪಾದನ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಇದಕ್ಕಾಗಿ ಸರ್ಕಾರ ತೆರಿಗೆ ದರಗಳನ್ನು ಇಳಿಸಬಹುದು. ಇದರಿಂದ ಜನರ ವರಮಾನದಲ್ಲಿ ಹಿಂದಿಗಿಂತ ಹೆಚ್ಚು ಭಾಗ ಅವರ ಕೈಯಲ್ಲೇ ಉಳಿಯುತ್ತದೆ. ಇದರಿಂದ ಅವರು ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಸರಕನ್ನು ಹೆಚ್ಚಾಗಿ ಕೊಳ್ಳಬಹುದು. ಆಗ ಅರ್ಥವ್ಯವಸ್ಥೆಯಲ್ಲಿ ಪರಿಣಾಮಕಾರಿ ಬೇಡಿಕೆ ಅಧಿಕವಾಗುತ್ತದೆ. ಇದರಿಂದ ಸರಕುಗಳ ಬೆಲೆಗಳ ಕುಸಿತಕ್ಕೆ ತಡೆಯುಂಟಾಗುವುದು ಸಹಜ. ಅಧಿಕ ಪರಿಣಾಮಕಾರಿ ಬೇಡಿಕೆಯಿಂದ ಸರಕುಗಳ ವಿಕ್ರಯ ಅಧಿಕವಾಗಿ ಅವುಗಳ ದಾಸ್ತಾನು ಕಡಿಮೆಯಾಗುವುದರಿಂದ ಸರಬರಾಯಿಯನ್ನು ಅಧಿಕಗೊಳಿಸುವ ಉತ್ಪಾದಕರು ಉತ್ಪಾದನಕಾರ್ಯವನ್ನು ಚುರುಕುಗೊಳಿಸುತ್ತಾರೆ. ಇದರಿಂದ ಉದ್ಯೋಗದ ಮಟ್ಟ ಏರಿ, ಮುಗ್ಗಟ್ಟು ಪ್ರವೃತ್ತಿಗೆ ತಡೆ ಏರ್ಪಡುತ್ತದೆ. ಆದರೆ ಸರ್ಕಾರ ತೆರಿಗೆ ದರಗಳನ್ನು ಇಳಿಸಿದಾಗ ಅದೇ ಪ್ರಮಾಣದಲ್ಲಿ ತನ್ನ ವ್ಯಯಗಳನ್ನು ಇಳಿಸದಿರುವುದು ಅವಶ್ಯ. ಸರ್ಕಾರದ ವ್ಯಯ ಮಾತ್ರ ಏಕ ರೀತಿಯಾಗಿದ್ದು ಅದರ ತೆರಿಗೆಯ ಆಯ ಕಡಿಮೆಯಾದಾಗ ಉದ್ಭವಿಸುವ ಕೊರತೆಯನ್ನು ತುಂಬಲು ಸರ್ಕಾರ ಹಿಂದೆ ಹೇಳಿದ ವಿಧಾನ ಅನುಸರಿಸಬೇಕಾಗುವುದರಿಂದ ಅರ್ಥವ್ಯವಸ್ಥೆಯಲ್ಲಿ ನಿವ್ವಳ ಹಣಸರಬರಾಯಿ ಅಧಿಕವಾಗುತ್ತದೆ. ಇದು ಕೊರತೆಯ ಹಣಕಾಸು.	

ತೆರಿಗೆಯ ಇಳಿತಾಯ ಮಾತ್ರದಿಂದಲೇ ಮುಗ್ಗಟ್ಟಿನ ಪ್ರವೃತ್ತಿಗೆ ತಡೆಯುಂಟಾಗದಿದ್ದರೆ ಸರ್ಕಾರ ಲೋಕೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ತನ್ನ ಖರ್ಚುಗಳನ್ನು ಅಧಿಕಗೊಳಿಸುತ್ತದೆ. ಸರ್ಕಾರದ ತೆರಿಗೆಯೇ ಮುಂತಾದ ಆಯ ಬಾಬ್ತುಗಳು ಏಕರೀತಿಯಾಗಿದ್ದು, ವ್ಯಯ ಮಾತ್ರ ಅಧಿಕವಾದಾಗ ಕೊರತೆ ಉದ್ಭವಿಸುತ್ತದೆ. ಆಯಕ್ಕಿಂತ ಹೆಚ್ಚಿನ ವ್ಯಯವನ್ನು ಅದು ಸಾಲದ ಮೂಲಕ ಪೂರೈಸುತ್ತದೆ. ಸರ್ಕಾರದ ವ್ಯಯಕಾರ್ಯದಿಂದ ರಾಷ್ಟ್ರೀಯ ವರಮಾನ ಹೆಚ್ಚುವುದರಿಂದ ಪರಿಣಾಮಕಾರಿ ಬೇಡಿಕೆಯೂ ಅಧಿಕವಾಗಿ, ಆರ್ಥಿಕ ಚಟುವಟಿಕೆಗಳಿಗೆ ಮತ್ತೊಮ್ಮೆ ಚೈತನ್ಯ ಲಭ್ಯವಾಗುತ್ತದೆ. ದೇಶದಲ್ಲಿ ನಿರುದ್ಯೋಗ ಅಧಿಕವಾಗಿದ್ದು ಬಂಡವಾಳದ ಸಾಮಥ್ರ್ಯ ಪೂರ ಉಪಯೋಗಕ್ಕೆ ಬಾರದಿದ್ದಾಗ ಸರ್ಕಾರ ಅನುಸರಿಸುವ ಕೊರತೆ ಹಣಕಾಸು ಕ್ರಮದಿಂದ ಉಬ್ಬರ ಪರಿಸ್ಥಿತಿಯುಂಟಾಗುವುದಿಲ್ಲವೆಂದು ಕೇನ್ಸ್ ಹೇಳಿದ್ದಾನೆ. ಏಕೆಂದರೆ ಈ ಕ್ರಮದಿಂದ ತತ್‍ಕ್ಷಣವೇ ಪರಿಣಾಮಕಾರಿ ಬೇಡಿಕೆ ಅಧಿಕವಾಗುವುದಲ್ಲದೆ ಉತ್ಪಾದನೆ ಮತ್ತು ಸರಬರಾಯಿಗಳೂ ಹೆಚ್ಚುತ್ತವೆ. ಉತ್ಪಾದನೆಯ ಸರಾಸರಿ ಮತ್ತು ಅಂಚಿನ ವೆಚ್ಚ ಅಧಿಕವಾಗದ್ದರಿಂದ ಅಧಿಕ ಸರಬರಾಯಿಗೆ ತಡೆಯಿರುವುದಿಲ್ಲ. ಆದ್ದರಿಂದ ಸರ್ಕಾರದ ಅಧಿಕ ವ್ಯಯವನ್ನು ತೆರಿಗೆಗಳಿಂದ ಪೂರೈಸುವ ಬದಲು ಕೊರತೆಯ ಹಣಕಾಸಿನ ಕ್ರಮದಿಂದಲೇ ಪೂರೈಸುವುದು ಸೂಕ್ತ. 

ಕೊರತೆಯ ಹಣಕಾಸಿನ ನೀತಿಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಭಿವೃದ್ಧಿ ಸಾಧಿಸಬಹುದೇ? ಎಂಬುದು ಇನ್ನೊಂದು ಪ್ರಶ್ನೆ. ಹೆಚ್ಚು ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಬಂಡವಾಳದ ನಿರ್ಮಾಣಕ್ಕಿಂತ ಹೆಚ್ಚು ವೇಗದಲ್ಲಿ ಜನಸಂಖ್ಯೆ ಅಧಿಕವಾಗುತ್ತದೆ. ಅಲ್ಲಿಯ ಕಾರ್ಮಿಕ ಜನಕ್ಕೆ ಪೂರ್ಣೋದ್ಯೋಗ ದೊರಕಿಸಿಕೊಡಬೇಕಾದರೆ ಅಗಾಧ ಬಂಡವಾಳವೇ ಬೇಕು. ಮುಂದುವರಿದ ದೇಶಗಳಲ್ಲಿ ಮುಗ್ಗಟ್ಟಿನ ಸಂದರ್ಭದಲ್ಲಿ ಬಂಡವಾಳದ ಕೊರತೆ ಇರುವುದಿಲ್ಲ. ಪರಿಣಾಮಕಾರಿ ಬೇಡಿಕೆಯನ್ನು ಹೆಚ್ಚಿಸುವುದು ಹೇಗೆಂಬುದೇ ಅಲ್ಲಿಯ ಸಮಸ್ಯೆ. ಆದರೆ ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲಿ ಬಂಡವಾಳದ ಕೊರತೆಯದೇ ಸಮಸ್ಯೆ. ಮುಂದುವರಿದ ದೇಶಗಳಲ್ಲಿ ಖಾಸಗಿ ಉದ್ಯಮಿಗಳು ಬಂಡವಾಳ ಪೂರೈಕೆಯ ಕಾರ್ಯ ನಿರ್ವಹಿಸುತ್ತಾರೆ. ಆದರೆ ಮುಂದುವರಿಯದ ದೇಶಗಳಲ್ಲಿ ಬಂಡವಾಳ ಹೂಡಿ ಉದ್ಯಮ ನಡಸಬಲ್ಲವರ ಸಂಖ್ಯೆ ತೀರ ಕಡಿಮೆ. ಆದ್ದರಿಂದ ಇಂಥ ದೇಶಗಳಲ್ಲಿ ಶೀಘ್ರ ಅಭಿವೃದ್ಧಿ ಸಾಧಿಸುವ ಹೊಣೆ ಸರ್ಕಾರದ್ದು. ಉಳಿತಾಯ ಮತ್ತು ತೆರಿಗೆಗಳಿಂದ ಬಂಡವಾಳ ಶೇಖರಣೆಯೂ ಅಭಿವೃದ್ದಿಯೂ ಸಾಧ್ಯ. ಆದರೆ ಜನರ ವರಮಾನ ಮಟ್ಟ ಬಹಳ ಕಡಿಮೆಯಾದ್ದರಿಂದ ಇವೆರಡರಿಂದಲೂ ಹೆಚ್ಚು ಬಂಡವಾಳದ ಪೂರೈಕೆ ಆಗದು. ವಿದೇಶೀ ನೆರವು ಇನ್ನೊಂದು ಮಾರ್ಗ. ಅದು ಕೂಡ ಅಗತ್ಯ ಪರಿಮಾಣದಲ್ಲಿ ಬರುವುದೆಂಬ ಭರವಸೆ ಇರುವುದಿಲ್ಲ. ಬಂದರೂ ಅದರ ಪರಿಣಾಮಗಳು ಯಾವಾಗಲೂ ಒಳ್ಳೆಯವಲ್ಲ. ಆದ್ದರಿಂದ ಸರ್ಕಾರಕ್ಕೆ ಉಳಿದ ಮಾರ್ಗವೆಂದರೆ ಕೊರತೆಯ ಹಣಕಾಸು. ಸರ್ಕಾರದ ಆಯಕ್ಕಿಂತ ವ್ಯಯ ಅಧಿಕವಾದಾಗ, ಸರ್ಕಾರದ ವಿನಿಯೋಜನೆ ಹೆಚ್ಚಿದಾಗ, ಅದಕ್ಕೆ ಅನುಗುಣವಾಗಿ ಜನರಲ್ಲಿ ಕೊಳ್ಳುವ ಶಕ್ತಿಯ ನಿರ್ಮಾಣವಾಗುತ್ತದೆ. ಇದರಿಂದ ಬೇಡಿಕೆಯೂ ಹೆಚ್ಚುತ್ತದೆ. ಆದರೆ ಅದೇ ಪ್ರಮಾಣದಲ್ಲಿ ಅನುಭೋಗ ಸರಕುಗಳ ಸರಬರಾಯಿ ಅಧಿಕವಾಗದು. ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಆಸ್ತಿಭಾರದ ರಚನೆಗಾಗಿ ಮತ್ತು ಬಂಡವಾಳಪ್ರಧಾನವಾದ ಮೂಲಭೂತ ಕೈಗಾರಿಕೆಗಳ ಹಾಗೂ ಬಂಡವಾಳ ಸರಕುಗಳ ಉತ್ಪಾದನೆಯ ಕೈಗಾರಿಕೆಗಳ ನಿರ್ಮಾಣಕ್ಕಾಗಿ ಮೊಟ್ಟಮೊದಲು ಕ್ರಮ ಕೈಗೊಳ್ಳಬೇಕಾಗುವುದರಿಂದ ಆ ಕಾಲದಲ್ಲಿ ಜನರ ಅನುಭೋಗ ಸರಕುಗಳ ಪೂರೈಕೆಯಾಗದೆ ಸರ್ಕಾರ ನಿರ್ಮಿಸಿದ ಅಧಿಕ ಹಣದಿಂದ ಬೆಲೆಗಳ ಮೇಲೆ ಒತ್ತಡ ಬೀಳುತ್ತದೆ. ಯಾವ ಮಿತಿಯವರೆಗೆ ಇಂಥ ಉಬ್ಬರ ಪ್ರವೃತ್ತಿಗಳನ್ನು ಬೆಳೆಯಗೊಡಬಹುದು ಎಂಬುದು ಪರಿಶೀಲಿಸಬೇಕಾದ ಪ್ರಶ್ನೆ. ಕೊರತೆಯ ಹಣಕಾಸಿನ ಫಲವಾದ ಉಬ್ಬರದ ವಿಭವವನ್ನು ಸೂಕ್ತ ತೆರಿಗೆ ನೀತಿ, ಹಣ ನೀತಿ, ಉದ್ದರಿಯ ಹವಣರಿತ ನಿಯಂತ್ರಣ, ಅಗತ್ಯಾನುಗುಣವಾಗಿ ಸಂಪನ್ಮೂಲಗಳ ಬಳಕೆ, ಆಯಾತಕ್ಕಿಂತ ನಿರ್ಯಾತ ಅಧಿಕವಾಗುವಂತೆ ಕ್ರಮಗಳ ಜಾರಿ. ಬೆಲೆಗಳ ಹತೋಟಿ, ಪಡಿತರ ಮುಂತಾದ ನಾನಾ ಮಾರ್ಗಗಳಿಂದ ಹಿಡಿತದಲ್ಲಿಡುವುದು ಅವಶ್ಯವಾಗುತ್ತದೆ.

ಕೊರತೆಯ ಹಣಕಾಸಿನಿಂದ ವಾಸ್ತವವಾಗಿ ಸಂಪತ್ಸಾಧನಗಳನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಜನರ ಕೈಯಲ್ಲಿರುವ ಹಣದ ಮೌಲ್ಯವನ್ನು ಕುಗ್ಗಿಸಿ, ಹಾಗೆ ಕುಗ್ಗಿದ ಭಾಗದ ಮೌಲ್ಯವನ್ನು ಜನಕ್ಕೆ ಅರಿವಾಗದಂತೆ ಸರ್ಕಾರ ತನ್ನ ಕೈಗೆ ತೆಗೆದುಕೊಳ್ಳುವ ವಿಧಾನವಿದು. ಬೆಳೆವಣಿಗೆಗೆ ಅಗತ್ಯವಾದ ವಾಸ್ತವ ಸಾಧನಗಳು ಅರ್ಥವ್ಯವಸ್ಥೆಯಲ್ಲಿ ಇಲ್ಲದೆ ಹೋದಾಗ ಕೊರತೆಯ ಹಣಕಾಸಿನಿಂದ ಅನರ್ಥವೇ ಸಂಭವಿಸಬಹುದು. ತೀವ್ರ ಅಸ್ಥಿರ ಬೆಲೆಗಳ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಕಾರ್ಯಕ್ರಮಗಳು ವಿಫಲಗೊಳ್ಳುವ ಅಪಾಯವಿದೆ.

ಭಾರತದಲ್ಲಿ ಯೋಜನೆಗಳಿಗೆ ಅಗತ್ಯವಾದ ಸಾಧನಗಳನ್ನು ಪಡೆಯುವ ಸಲುವಾಗಿ ಇತರ ಮಾರ್ಗಗಳ ಜೊತೆಗೆ ಮುಖ್ಯವಾಗಿ ಕೊರತೆಯ ಹಣಕಾಸಿನ ನೀತಿ ಅನುಸರಿಸಲಾಗಿದೆ. ತೆರಿಗೆ, ಸಾಲ, ನೆರವು ಮುಂತಾದವುಗಳಿಗೂ ಮೀರಿದ ವಿನಿಯೋಜನೆಗಳಿಗೆ ಹಣನಿರ್ಮಾಣ ಅನಿವಾರ್ಯವೆನಿಸಿದೆ. ಇದು ಅಪಾಯದ ಮಟ್ಟವನ್ನು ಮೀರಿಹೋಗದಂತೆ ಸರ್ಕಾರ ತನ್ನ ಕೈಲಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿದೆ. 

ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಸರ್ಕಾರ ಕೈಗೊಂಡಿರುವ ಕೊರತೆಯ ಹಣಕಾಸಿನ ಪರಿಮಾಣವನ್ನು ಮುಂದೆ ಕೊಟ್ಟಿದೆ :
	 (ಕೋಟಿ ರೂ.ಗಳಲ್ಲಿ)

ಒಂದನೆಯ ಯೋಜನೆ
. . .
  420

ಎರಡನೆಯ ಯೋಜನೆ
. . .
948

ಮೂರನೆಯ ಯೋಜನೆ
. . .
826

1966-67
. . .
226

1967-68
. . .
257

1968-69 (ಪರಿಷ್ಕøತ)
. . .
240

ನಾಲ್ಕನೆಯ ಯೋಜನೆ (ನಿರೀಕ್ಷಿತ)
. . .
850

(ಎಸ್.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ